ಬ್ಯಾತೊಲಿತ್
	ಭೂಮಿಯ ಮೇಲ್ಪದರದಿಂದ ಗಮನಾರ್ಹ ಆಳದಲ್ಲಿ ಸ್ಪಟಿಕೀಕರಿಸಿದ ಅಗ್ನಿಶಿಲೆಯ ಬೃಹತ್ ವಸ್ತು. ಗ್ರೀಕ್ ಭಾಷೆಯಲ್ಲಿ ಬ್ಯಾತೋಸ್ ಎಂದರೆ ಆಳ ಎಂದೂ ಲಿತೋಸ್ ಎಂದರೆ ಶಿಲೆ ಎಂದೂ ಅರ್ಥ. ಇವೆರಡರ ಸಂಯುಕ್ತ ಪದವೇ ಬ್ಯಾತೊಲಿತ್. ಇದು ಅಸಮವಾದ ಅಡ್ಡಕೊಯ್ತದ ಮೇಲ್ಮೈಗಳಿಂದ ಇಲ್ಲವೆ ಸ್ತರಭಂಗಹೊಂದಿದ ತಲಗಳಿಂದ ಸುತ್ತುವರಿದಿರುತ್ತದೆ. ಬ್ಯಾತೊಲಿತುಗಳ ಮೇಲ್ಭಾಗ ನೆಲದ ಮೇಲಕ್ಕೆ ಚಾಚಲ್ಪಟ್ಟು ಮಿಕ್ಕ ಇಡೀ ಭಾಗ ದುಂಡನೆಯ ಗುಮ್ಮಟದಂತೆ ನೆಲದಾಳದಲ್ಲಿ ಅಗಲಗೊಳ್ಳುತ್ತ ಲೀನವಾಗಿರುತ್ತದೆ.

	ಭೂಮಿಯ ಹೊರಪದರದ ತಳಭಾಗದಲ್ಲಿ ಅಲ್ಲಲ್ಲೇ ಶಿಲಾಪಾಕ ರೂಪುಗೊಂಡು ಭೂಮಿಯ ಹೊರಮೈಯತ್ತ ನುಗ್ಗಲು ಪ್ರಯತ್ನಿಸುತ್ತಿರುತ್ತದೆ. ಶಿಲಾಪಾಕ ಅತಿಯಾದ ಉಷ್ಣ ಮತ್ತು ಅಧಿಕ ಒತ್ತಡಗಳಿಂದ ಒಡಗೂಡಿರುವಂಥದು. ಇಂಥ ಸ್ಥಿತಿಯಲ್ಲಿರುವ ಶಿಲಾಪಾಕ ಕಡಿಮೆ ಉಷ್ಣ ಮತ್ತು ಒತ್ತಡವಿರುವ ಹೊರಮೈಯತ್ತ ನುಗ್ಗುವುದು ಸಹಜವೇ. ಹೀಗೆ ಮೇಲಕ್ಕೆ ನುಗ್ಗುವಾಗ ಹಾದಿಯಲ್ಲಿ ಅನೇಕ ಸ್ತರಗಳನ್ನು ಭೇದಿಸಿಕೊಂಡು ಮುಂದುವರಿಯುತ್ತ ಕೆಲವೊಂದು ಶಿಲೆಗಳನ್ನು ತನ್ನಲ್ಲಿ ಅರಗಿಸಿಕೊಳ್ಳುವುದೂ ಉಂಟು. ಇಂಥ ಶಿಲಾಪಾಕಕ್ಕೆ ವಿಸಂಗತ (ಡಿಸ್‍ಕಾರ್ಡೆಂಟ್) ಉದ್ಭವಿ ಅಥವಾ ವಿಸಂಗತ ಅಂತಸ್ಸರಣ ಶಿಲಾಕೃತಿ ಎಂದು ಹೆಸರು. ಈ ಬೃಹತ್ ಶಿಲಾಕೃತಿಯ ಮೇಲ್ಭಾಗ ನೆಲದ ಸಮೀಪದವರೆಗೂ ಬರುತ್ತದೆ. ನೆಲದ ಮೇಲೆ ಆಗುವ ನೈಸರ್ಗಿಕ ಭೂಸವೆತ ಕಾರ್ಯಗಳಿಂದ ಅದರ ಮೇಲೆ ಹಿಂದೆ ಇದ್ದ ಶಿಲಾವರಣವೆಲ್ಲ ಶಿಥಿಲಗೊಂಡು ಬೇರೆಡೆಗೆ ಸಾಗಿಸಲ್ಪಡುತ್ತವೆ. ಈ ಸನ್ನಿವೇಶದಲ್ಲಿ ಬ್ಯಾತೊಲಿತುಗಳ ಶಿರ ಹೊರಚಾಚುತ್ತದೆ.

	ಬ್ಯಾತೊಲಿತುಗಳು ಗಿರಿ ಪರ್ವತಗಳ ಸಾಲಿನಲ್ಲಿ ಕಂಡುಬರುತ್ತವೆ. ನಿರ್ದಿಷ್ಟ ಆಕಾರವಿಲ್ಲದೆ ಕೆಲವೊಮ್ಮೆ ಗುಡ್ಡದ ಹಾಗೆ ತೋರುವುದೂ ಉಂಟು. ಇವು ಬಾಸ್. ಬೇರೆ ಸಂದರ್ಭಗಳಲ್ಲಿ ಬೃಹತ್ ಕಂಬದಂತೆ ಉದ್ದವಾಗಿ, ಮೇಲ್ಭಾಗ ವೃತ್ತಾಕಾರದಲ್ಲಿರುತ್ತದೆ. ಇವು ಸ್ಟಾಕ್. ಬ್ಯಾತೊಲಿತ್ ಉದ್ಭವಿಸುವಾಗ ಹಿಂದಿದ್ದ ಶಿಲೆಯ ಚೂರುಗಳು ಅಲ್ಲಲ್ಲೆ ಸಂಪೂರ್ಣವಾಗಿ ಕರಗಿ ಮಿಶ್ರಗೊಳ್ಳದೆ ಉಳಿದಿರುತ್ತವೆ. ಈ ಉಳಿಕೆಗಳು ಕ್ಸೀನ್ಸೋಲಿತ್.

	ಬ್ಯಾತೊಲಿತುಗಳು ಸಾಮಾನ್ಯವಾಗಿ ಗ್ರಾನೈಟ್ ಅಥವಾ ಗ್ರಾನೋಡಯರೈಟುಗಳಿಂದ ಕೂಡಿರುತ್ತವೆ. ಶಿಲಾಕೃತಿಯ ಅದ್ಯಂತ ಒಂದೇ ಸಮವಾದ ಖನಿಜ ಸಂಯೋಜನೆ ಉಂಟು. ಕೆಲವು ಸ್ಟಾಕುಗಳು ಕ್ವಾಟ್ರ್ಸ್ ಡಯರೈಟ್ ಮತ್ತು ಡಯರೈಟ್ ಇಲ್ಲವೆ ಮಾನ್‍ಸೊನೈಟ್ ಮತ್ತು ಸಯನೈಟುಗಳಿಂದ ಕೂಡಿರುತ್ತವೆ.

	ಬ್ಯಾತೊಲಿತುಗಳು ಬಲು ಆಳದಿಂದ ನುಗ್ಗಿ ಹಿಂದಿದ್ದ ಶಿಲೆಯನ್ನು ತಳ್ಳಿ ರೂಪುಗೊಂಡವೆಂದು ಹಿಂದೆ ನಂಬಲಾಗಿತ್ತು. ಇದು ನಿಜವಾಗಿದ್ದ ಪಕ್ಷದಲ್ಲಿ ತಳ್ಳಲ್ಪಟ್ಟ ಶಿಲೆ ಏನಾಯಿತು ಎಂಬ ಪ್ರಶ್ನೆ ಉಳಿಯುತ್ತಿತ್ತು. ಅದರಿಂದ ಬ್ಯಾತೊಲಿತ್ತಿನ ಉದ್ಭವಕ್ರಿಯೆ ನಿಧಾನವಾಗಿದ್ದು ಬಿಸಿ ಮ್ಯಾಗ್ಮದ ದ್ರವಗಳು ಶಿಲಾವರಣದೊರಕ್ಕೆ ನುಗ್ಗಿ ಆಯಾನುಗಳು ವಿನಿಮಯಗೊಂಡು ಗ್ರಾನೈಟ್ ಆಗಿ ಪರಿವರ್ತನೆಗೊಂಡಿರಬಹುದೆಂದು ನಂಬಲಾಗಿದೆ. ಈ ಪ್ರಕ್ರಿಯೆಗೆ ಗ್ರಾನೈಟೇಸೇಷನ್ ಎಂದು ಹೆಸರು.

	ಬ್ಯಾತೊಲಿತ್ತಿನ ಗಾತ್ರ ದೊಡ್ಡದು, ಗಾತ್ರವನ್ನು ಗುರುತ್ವಮಾಪಕ ಮತ್ತು ಕಾಂತಮಾಪಕಗಳ ಸಹಾಯದಿಂದ ಅಳೆಯಬಹುದು. ಕರ್ನಾಟಕ ರಾಜ್ಯದ ಅರಸೀಕೆರೆ, ಬಾಣಾವರ ಮತ್ತು ಬಳ್ಳಾರಿ ಪ್ರದೇಶಗಳಲ್ಲೂ ಬ್ಯಾತೊಲಿತ್ ಶಿಲಾಕೃತಿಗಳು ಕಾಣಬರುತ್ತವೆ.

	ಭೂಮಿಯೊಳಗೆ ಉಂಟಾದ ಮಡಿಕೆಗಳು, ಕುಸಿತಗಳಿಂದ ಉಂಟಾದ ತೆರಪುಗಳಲ್ಲಿ ಶಿಲಾಪಾಕ ತುಂಬಿ ಬ್ಯಾತೊಲಿತ್ ಉಂಟಾಗಿರಬಹುದೆಂದು ಭೂವಿಜ್ಞಾನಿ ಇ. ಸುಯೆಸ್ ಎಂಬಾತನ ಊಹೆಯಾಗಿತ್ತು. ಇದಕ್ಕೆ ಪೋಷಕವಾಗಿ ಭೂಮಿಯ ಬೃಹತ್ ಬಿರುಕುಗಳ ಉದ್ದಕ್ಕೂ ಬ್ಯಾತೊಲಿತುಗಳು ಕಂಡುಬರುತ್ತವೆ ಎಂದು ಭೂವಿಜ್ಞಾನಿಗಳಾದ ಇಡ್ಡಿಂಗ್ಸ್ ಮತ್ತು ಕ್ಲೂಸ್ ಎಂಬವರು ಅಭಿಪ್ರಾಯ ಪಟ್ಟಿದ್ದಾರೆ.							(ವೈ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ